ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ
ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೆ

ರವಿ ಚಂದ್ರ ಬುಧ ನೀನೆ ರಾಹು ಕೇತುವು ನೀನೆ
ಕವಿ ಗುರು ಶನಿಯು ಮಂಗಳನು ನೀನೆ
ದಿವರಾತ್ರಿಯು ನೀನೆ ನವವಿಧಾನವು ನೀನೆ
ಭವರೋಗ ಹರ ನೀನೆ ಭೇಷಜನು ನೀನೆ

ಪಕ್ಷ ಮಾಸವು ನೀನೆ ಪರ್ವ ಕಾಲವು ನೀನೆ
ನಕ್ಷತ್ರ ಯೋಗ ತಿಥಿ ಕರಣ ನೀನೆ
ಅಕ್ಷಯವಾಗಿ ದ್ರೌಪದಿಯ ಮಾನ ಕಾಯ್ದ
ಪಕ್ಷಿವಾಹನ ನೀನೆ ರಕ್ಷಕನು ನೀನೆ

ಋತು ವತ್ಸರವು ನೀನೆ ಪೃಥ್ವಿಗಾದಿಯು ನೀನೆ
ಕ್ರತು ಹೋಮ ಯಜ್ಞ ಸದ್ಗತಿಯು ನೀನೆ
ಜಿತವಾಗಿ ಎನ್ನೊಡೆಯ ಪುರಂದರ ವಿಠಲನೆ
ಶ್ರುತಿಗೆ ಸಿಲುಕದ ಅಪ್ರತಿಮ ಮಹಿಮಾ ನೀನೆ






Comments

Popular posts from this blog

ಅಪ್ಪನ ಮಾತು...

Not bad = Good?